ಪೆಸ್ಸಾರಿಡೇ ಕುಟುಂಬಕ್ಕೆ ಸೇರಿದ ಒಂದು ಹಕ್ಕಿ. ನೇಯ್ಗೆ ಹಕ್ಕಿ ಪರ್ಯಾಯನಾಮ. ಪ್ಲೋಸಿಯಸ್ ಈ ಜಾತಿಯ ವೈಜ್ಞಾನಿಕ ನಾಮ. ಭಾರತದಲ್ಲಿ ಪ್ಲೋಸಿಯಸ್ ಫಿಲಿಪಿನೆನ್ಸಿಸ್, ಪ್ಲೊ, ಮನ್ಯಾರ್ ಮತ್ತು ಪ್ಲೊ. ಬೆಂಗಾಲೆನ್ಸಿಸ್ ಎಂಬ ಮೂರು ಪ್ರಭೇಧಗಳಿವೆ. ಇವುಗಳಲ್ಲಿ ಬಲು ಸಾಮಾನ್ಯವಾದ ಪ್ರಭೇದವೆಂದರೆ ಪ್ಲೋಸಿಯಸ್ ಫಿಲಿಪಿನೆನ್ಸಿಸ್. ಈ ಹಕ್ಕಿ ಗುಬ್ಬಚ್ಚಿಯ ಗಾತ್ರದಷ್ಟೆ ಇದೆ : ಸಂತಾನೋತ್ಪತ್ತಿ ಕಾಲದಲ್ಲಿ ಬಿಟ್ಟು ಮಿಕ್ಕ ಕಾಲದಲ್ಲಿ ಇದರ ಬಣ್ಣ ಗುಬ್ಬಚ್ಚಿಯ ಬಣ್ಣದಂತೆಯೆ ಇರುತ್ತದೆ. ಕೊಕ್ಕು ದೃಢವಾಗಿ ಶಂಕುವಿನಾಕಾರಕ್ಕಿದೆ. ಬಾಲ ಮೋಟಾಗಿ ಚಚ್ಚೌಕವಾಗಿ ಕತ್ತರಿಸಿದ ಹಾಗಿದೆ. ಗೀಜಗನ ಹಕ್ಕಿಗಳ ವಾಸ ಕೃಷಿಯ ಬಯಲು ಪ್ರದೇಶಗಳಲ್ಲಿ. ಸಾಮಾನ್ಯವಾಗಿ ಗುಂಪುಗಳಲ್ಲಿರುವುದೇ ವಾಡಿಕೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬರ್ಮಾಗಳಲ್ಲಿ ಈ ಹಕ್ಕಿಗಳ ವ್ಯಾಪ್ತಿ ಇದೆ. ಇವುಗಳಲ್ಲಿ ವಲಸೆ ಹೋಗುವ ಕ್ರಮವೂ ಉಂಟು. ಸಾಮಾನ್ಯವಾಗಿ ದೊಡ್ಡ ಗುಂಪುಗಳು ಕೊಯ್ಲಿಗೆ ಬಂದ ಬತ್ತ ಮತ್ತು ಇತರ ಧಾನ್ಯಗಳ ಕೃಷಿಭೂಮಿಗಳ ಬಳಿ ಮಾತ್ರ ಇರುತ್ತವೆ. ಕೆಲವೊಮ್ಮೆ ಬಲಿಯುತ್ತಿರುವ ತೆನೆಗಳನ್ನು ಹಾಳು ಮಾಡುವುದುಂಟು. ಸಾಮಾನ್ಯವಾಗಿ ಸಸ್ಯಾಹಾರಿಗಳಾದ ಇವು ಕೆಲವೊಮ್ಮೆ ಕೀಟಗಳನ್ನೂ ತಿನ್ನುತ್ತವೆ. ಸಂತಾನೋತ್ಪತ್ತಿ ಕಾಲದಲ್ಲಿ ಗಂಡು ಚೀ ಚೀ ಎಂದು ಕೂಗುತ್ತ ಹೆಣ್ಣನ್ನು ಬಹುದೂರ ಅಟ್ಟಿಸಿಕೊಂಡು ಹೋಗುವುದುಂಟು. ಗೂಡು ಕಟ್ಟುವ ಕಾಲ ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ, ಈ ಅವಧಿ ಮುಂಗಾರು ಮಳೆಗಾಲಕ್ಕೂ ಬತ್ತದ ಅಥವಾ ದವಸಗಳ ಕೊಯ್ಲಿಗೂ ಹೊಂದಿಕೊಳ್ಳತ್ತದೆ. ಗೀಜಗನ ಹಕ್ಕಿಗಳು ಗೂಡುಕಟ್ಟುವುದರಲ್ಲಿ ಬಹಳ ಬುದ್ಧಿಶಕ್ತಿಯನ್ನೂ ಕುಶಲತೆಯನ್ನೂ ಪ್ರದರ್ಶಿಸುತ್ತದೆ. ಸಾಧಾರಣವಾಗಿ ನದಿ, ಕೆರೆ ನೀರಿನ ಮೇಲೆ ಬಾಗಿರುವ ಮರದ ರೆಂಬೆಗಳ, ಈಚಲುಗರಿಗಳ ತುದಿಯಲ್ಲಿ ಇಲ್ಲವೆ ನೀರಿನಲ್ಲಿ ಬೆಳೆಯುವ ಜೋಡುಗಳ ಮಧ್ಯೆ ಗೂಡನ್ನು ನಿರ್ಮಿಸುತ್ತವೆ. ಗೂಡುಗಳ ನಿರ್ಮಾಣಕ್ಕೆ ಬತ್ತದ ಹುಲ್ಲುಗಳನ್ನು ಬಳಸುತ್ತವೆ. ತಮ್ಮ ಕೊಕ್ಕು ಕಾಲುಗಳನ್ನು ಕುಶಲತೆ ಯಿಂದ ಬಳಸುತ್ತ ರೆಕ್ಕೆಗಳನ್ನು ಬಡಿಯುತ್ತ ಗೂಡು ನಿರ್ಮಿಸು ವುದನ್ನು ನೋಡಲು ಚೆನ್ನ. ಗೂಡು ಹೂಜಿಯಂತೆ ಇಲ್ಲವೆ ಬಟ್ಟಿಪಾತ್ರೆ ಯಂತೆ ಇರುತ್ತದೆ. ಇದರಲ್ಲಿ ಕೊಂಬೆಗೆ ತೂಗುಹಾಕುವ ಭಾಗ, ಮೊಟ್ಟೆಯಿಡುವ ವಿಶಾಲವಾದ ಗುಂಡು ಭಾಗ ಮತ್ತು ಉದ್ದವಾದ ನೇರವಾದ ಪ್ರವೇಶದ್ವಾರ ಭಾಗ ಎಂಬ ಮೂರು ಭಾಗಗಳಿವೆ. ಪ್ರವೇಶದ್ವಾರ ಕೆಳಮುಖವಾಗಿ ತೆರೆಯುತ್ತದೆ. ಮೊಟ್ಟೆಯಿಡುವ ಭಾಗದ ತಳಕ್ಕೆ ಹಸಿ ಜೇಡಿಮಣ್ಣನ್ನು ಮೆತ್ತಿರುವುದುಂಟು. ಗೂಡು ನಿರ್ಮಾಣದ ಕೆಲಸ ಗಂಡಿನದಾದರೆ, ಮೊಟ್ಟೆಗೆ ಕಾವು ಕೊಡುವ ಕೆಲಸ ಹೆಣ್ಣಿನದು. ಸಾಮಾನ್ಯವಾಗಿ ಒಂದು ಗಂಡು ಹಕ್ಕಿ ಹಲವಾರು ಹೆಣ್ಣು ಹಕ್ಕಿ ಗಳೊಂದಿಗೆ ಸಂಪರ್ಕವಿಟ್ಟು ಕೊಂಡಿರುತ್ತದೆ.

ನೇಯ್ಗೆ ಹಕ್ಕಿಯು ಹೆಣ್ಣನ್ನು ಒಲಿಸಿಕೊಳ್ಳುವ ಪರಿ ವಿಶೇಷ ವಾದದ್ದು. ಗಂಡುಹಕ್ಕಿ ತನ್ನ ಪ್ರಭೇದಕ್ಕೆ ವಿಶಿಷ್ಟವಾದ (ಮೇಲೆ ವಿವರಿಸಿರುವ)ಗೂಡನ್ನು ಅರ್ಧ ನಿರ್ಮಿಸಿ ಹೆಣ್ಣಿಗೆ ತೋರಿಸುತ್ತದೆ. ಅದು ಒಪ್ಪಿದರೆ, ಗಂಡು ಮುಂದುವರೆದು ಗೂಡನ್ನು ಪುರೈಸಿ ಸಂತಾನೋತ್ಪತ್ತಿ ಯಾಗುತ್ತದೆ. ಇಲ್ಲದಿದ್ದಲ್ಲಿ ಗಂಡು ಆ ಗೂಡನ್ನು ಅಷ್ಟಕ್ಕೇ ಬಿಟ್ಟು ಮತ್ತೊಂದು ಗೂಡು ನಿರ್ಮಿಸಿ ಹೆಣ್ಣಿಗೆ ತೋರಿಸುತ್ತದೆ ಮತ್ತು ಪ್ರಕ್ರಿಯೆ ಮುಂದುವರೆಯುತ್ತದೆ. ಹೀಗಾಗಿ ಅರೆನಿರ್ಮಿತ ಅನೇಕ ಗೂಡುಗಳು ನೇಯ್ಗೆ ಹಕ್ಕಿ ಗೂಡು ಮಾಡುವ ಸ್ಥಳಗಳಲ್ಲಿ (ಸಾಮಾನ್ಯವಾಗಿ ನೀರಿನ ಬಳಿ ಬಳಸದ ಆದರೆ ನೀರಿರುವ ಬಾವಿಗಳು) ಕಂಡುಬರುತ್ತದೆ. ಈ ಹಕ್ಕಿಗಳ ವಿಶಿಷ್ಟ ಈ ನಡವಳಿಕೆಯನ್ನು ಜಗತ್ತಿಗೆ ಪರಿಚಯಿಸಿದವರು ಭಾರತದ ಹಕ್ಕಿ ಮನುಷ್ಯ ಸಲೀಂ ಅಲಿ. ಸಲೀಂ ಅಲಿಯವರ ಮುಖ್ಯ ವೈಜ್ಞಾನಿಕ ಕೊಡುಗೆಗಳಲ್ಲಿ ಇದು ಪ್ರಮುಖವಾದದ್ದು ಸಲೀಂ ಅಲಿ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ